• Fri. Nov 14th, 2025

Tv2 News Kannada

ನೇರ ನಿತ್ಯ ನಿರಂತರ ಸುದ್ದಿಗಳು

ವಿಜಯಪುರದಲ್ಲಿ ಒಬ್ಬಂಟಿ ಮಹಿಳೆಯ ಮನೆಗೆ ನುಸುಳಿದ ಕಳ್ಳರು: ಮುನ್ಸಿಪಲ್ ಅಧಿಕಾರಿಗಳ ವೇಷದಲ್ಲಿ ಕಳ್ಳತನಕ್ಕೇ ಯತ್ನ.

SHARE

ವಿಜಯಪುರ, ನವೆಂಬರ್ ೭, ೨೦೨೫: ವಿಜಯಪುರ ನಗರದ ಸಾಯಿ ಪಾರ್ಕ್ ಪ್ರದೇಶದ ಶ್ರೀ ಸಿದ್ದೇಶ್ವರ ಕಾಲೋನಿಯಲ್ಲಿ ಶುಕ್ರವಾರ, ನಡೆದ ಘಟನೆಯೊಂದು ನಾಗರಿಕರನ್ನು ಅಚ್ಚರಿಗೊಳಿಸಿದೆ. ಮಧ್ಯಾಹ್ನ ಸುಮಾರು 3 ಗಂಟೆ ಸಮಯದಲ್ಲಿ, ನಾಲ್ವರು ಕಳ್ಳರ ತಂಡವೊಂದು ಒಬ್ಬಂಟಿ ಮಹಿಳೆಯ ನಿವಾಸವನ್ನು ಗುರಿಯಾಗಿರಿಸಿಕೊಂಡು, ವಿಜಯಪುರ ಮುನ್ಸಿಪಲ್ ಕಾರ್ಪೋರೇಷನ್ ಅಧಿಕಾರಿಗಳ ವೇಷ ಧರಿಸಿ ಮನೆಗೆ ನುಸುಳಿ ಬೆಲೆಬಾಳುವ ವಸ್ತುಗಳನ್ನು ಕದಿಯಲು ಯತ್ನಿಸಿದ್ದಾರೆ.

ಘಟನೆಯ ವಿವರ ಹೀಗಿದೆ: ಕಳ್ಳರು ಮನೆಯಲ್ಲಿದ್ದ ಮಹಿಳೆಯನ್ನು ಸಂಪರ್ಕಿಸಿ, ಮನೆಮೇಲೆ ಉಚಿತ ನೀರಿನ ಟ್ಯಾಂಕ್ ಅಳವಡಿಸಲಾಗುವುದು ಎಂದು ಹೇಳಿ ಅವಳನ್ನು ಮೋಸಗೊಳಿಸಿದರು. ಮಹಿಳೆ ಮನೆಯಲ್ಲಿ ಈಗಾಗಲೇ ಟ್ಯಾಂಕ್ ಇದೆಯೆಂದು ತಿಳಿಸಿದ ನಂತರ, ಅದರ ಅಂದಾಜಿ ವೆಚ್ಚದ ಹಣವನ್ನು ಸರ್ಕಾರದಿಂದ ಪಡೆಯಲು ಸಹಾಯ ಮಾಡುವುದಾಗಿ ಭರವಸೆ ನೀಡಿದರು. ನಂತರ ಅವರು ಮನೆಯ ಸದಸ್ಯರ ಬಗ್ಗೆ ಮತ್ತು ಅವರ ದಿನಚರಿ ಕಾರ್ಯಕ್ರಮಗಳ ಬಗ್ಗೆ ವಿವರವಾಗಿ ವಿಚಾರಿಸಿದರು.

ಇಬ್ಬರು ಕಳ್ಳರು, ಮನೆಮೇಲೆ ನೀರಿನ ಟ್ಯಾಂಕ್ ನೋಡಿ ಅಂದಾಜಿ ಮಾಡಲು ಮತ್ತು ಜಿಪಿಎಸ್ ಗುರುತು ಹಾಕಲು ಅವರು ಆ ಮಹಿಳೆಯನ್ನು ಮನೆಯ ಮೇಲ್ಛಾವಣಿಗೆ ಕರೆದುಕೊಂಡು ಹೋದರು. ಈ ಸಮಯದಲ್ಲಿ, ತಂಡದ ಇಬ್ಬರು ಸದಸ್ಯರು ಮಹಿಳೆಯ ಗಮನ ತಪ್ಪಿಸಿ ಮನೆ ಒಳಗೆ ನುಸುಳಿದರು. ಮಹಿಳೆ ಮೇಲೆ ಇದ್ದಾಗ, ಒಳಗೆ ನುಸುಳಿದವರು ಮೊಬೈಲ್ ಕಾನ್ಫರನ್ಸ್ ಕಾಲ್ ಮೂಲಕ ‘ಕೋಡ್ ವರ್ಡ್ಗಳನ್ನು’ ಬಳಸಿ ಸಂವಹನ ನಡೆಸಿದರು. ‘ಊಟ ಸಿಕ್ಕಿತಾ?’, ‘ಊಟ ಆಯಿತಾ?’, ‘ಚಲೋ ಹೋಟೆಲ್ ಹುಡುಕು’ ಎಂಬ ಪದಗಳನ್ನು ಬಳಸಿ ತಮ್ಮ ಸಹಯೋಗಿಗೆ ಮನೆಯೊಳಗಿನ ಸನ್ನಿವೇಶದ ಬಗ್ಗೆ ಸಂಕೇತ ನೀಡಿದರು. ಮಹಿಳೆಯನ್ನು ಟೇಪ್‌ನಿಂದ ಅಳತೆ ಮಾಡುವಂತೆ ಹಾಗೂ GPS ಫೋಟೋ ತೆಗೆಸಿಕೊಳ್ಳುವಂತೆ ಹೇಳಿ ಮನೆಯ ಮೇಲೆ ಬ್ಯುಸಿಯಾಗಿ ಇರಿಸಿದರು.

ಆಕಸ್ಮಿಕವಾಗಿ, ಪಕ್ಕದ ಮನೆಯ ಮಹಿಳೆ ಅಲ್ಲಿಗೆ ಬಂದಾಗ ಘಟನೆ ತಿರುವು ಪಡೆಯಿತು. ಹೊಸಬರು ಮನೆಯಲ್ಲಿರುವುದನ್ನು ಗಮನಿಸಿದ ಪಕ್ಕದ ಮಹಿಳೆ, ಮನೆಯ ಯಜಮಾನಿಯರು ಎಲ್ಲಿದ್ದಾರೆಂದು ಕೇಳಿದಳು. ಉತ್ತರಿಸದೆ, ಕಳ್ಳರು ಮೌನವಾಗಿ ನಿಂತರು. ನಂತರ ಅವರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಎದುರು ಬಂದು, ತಾವು ಮುನ್ಸಿಪಲ್ ಅಧಿಕಾರಿಗಳೆಂದು ಹೇಳಿದರು. ಪಕ್ಕದ ಮಹಿಳೆಯು ಬೆಡ್ ರೂಮ್‌ನಲ್ಲಿ ಏನು ಮಾಡುತ್ತಿದ್ದೀರಿ ಎಂದು ಕೇಳಿದಾಗ, ‘ಪೈಪ್ ಕನೆಕ್ಷನ್ ತಪಾಸಣೆ’ ಎಂದು ಸುಳ್ಳು ಹೇಳಿದರು. ಇದೇ ಸಮಯದಲ್ಲಿ, ‘ಮೇಲಿನವರೆಗೆ ಊಟದ ಕೆಲಸ ಕೆಟ್ಟಿತು’ ಎಂದು ಕೋಡ್ ವರ್ಡ್ ಮೂಲಕ ಸಂದೇಶ ತಲುಪಿಸಿ, ಕ್ಷಣಾರ್ಧದಲ್ಲಿ ಎಲ್ಲರೂ ಅಲ್ಲಿಂದ ಪಲಾಯನ ಮಾಡಿದರು. ಕಳ್ಳತನ ತಪ್ಪಿದ್ದರಿಂದ ಈ ಘಟನೆಯನ್ನು ಪೋಲಿಸ್ ಠಾಣೆಗೆ ತಿಳಿಸಿರುವುದಿಲ್ಲ. ಇಂತಹ ಯಾವುದೇ ಘಟನೆ ಬೆಳಕಿಗೆ ಬಂದರೆ ಪೊಲೀಸ್ ಠಾಣೆಯಲ್ಲಿ ತಿಳಿಸುವುದು ಉತ್ತಮ.



ನಾಗರಿಕರಿಗೆ ಎಚ್ಚರಿಕೆ: ಈ ಘಟನೆಯಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವ ಜನರು, ವಿಶೇಷವಾಗಿ ಒಬ್ಬಂಟಿ ವಾಸಿಸುವ ಪುರುಷರು ಮತ್ತು ಮಹಿಳೆಯರು, ಎಚ್ಚರಿಕೆ ವಹಿಸಬೇಕಾಗಿದೆ. ಯಾರೂ ಪುಕ್ಕಟೆಯ ಆಸೆಗೆ ಮೋಸ ಹೋಗಬಾರದು. ಅಪರಿಚಿತರು ಯಾವುದೇ ಸರ್ಕಾರಿ ಯೋಜನೆಯ ಹೆಸರಲ್ಲಿ ಬಂದರೆ, ಅವರ ಅಧಿಕಾರ ಪತ್ರ ಮತ್ತು ಗುರುತಿನ ಚೀಟಿಯನ್ನು ಸರಿಯಾಗಿ ಪರಿಶೀಲಿಸಿ, ನೇರವಾಗಿ ಸಂಬಂಧಿಸಿದ ಕಾರ್ಯಾಲಯವನ್ನು ಸಂಪರ್ಕಿಸಿ ದೃಢೀಕರಿಸಬೇಕು. ಪ್ರಪಂಚದಲ್ಲಿ ಯಾರೂ ನೋವಿಲ್ಲದೆ ಉಚಿತವಾಗಿ ಏನೂ ನೀಡುವುದಿಲ್ಲ ಎಂಬುದನ್ನು ಎಂದೂ ಮರೆಯಬೇಡಿ.


SHARE

By ANAND BABU TALAWAR

ನಿರ್ದೇಶಕ, ಮುಖ್ಯ ಸಂಪಾದಕರು ಮತ್ತು ಮಾಲಿಕ: ಶ್ರೀ ಆನಂದ ಬಾಬು ತಳವಾರ ಅವರು ಈ TV 2 ನ್ಯೂಸ್ ಕನ್ನಡದ ನಿರ್ದೇಶಕರಾಗಿದ್ದು, ಮುಖ್ಯ ಸಂಪಾದಕರಾಗಿಯೂ ಮತ್ತು ಮಾಲಿಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮರ್ಥ ನಾಯಕತ್ವದೊಂದಿಗೆ ನಿಷ್ಪಕ್ಷಪಾತ ಸುದ್ದಿಯನ್ನು ಜನತೆಗೆ ತಲುಪಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದಾರೆ. ಕನ್ನಡದ ಮಾಧ್ಯಮ ಕ್ಷೇತ್ರದಲ್ಲಿ ಹಲವಾರು ವರ್ಷಗಳ ಅನುಭವ ಹೊಂದಿರುವ ಇವರು, ಸಮರ್ಥ ಸಂಪಾದಕೀಯ ತೀರ್ಮಾನಗಳ ಮೂಲಕ ನಿಜವಾದ ಮಾಹಿತಿ ನೀಡಲು ಸದಾ ಪ್ರಯತ್ನಿಸುತ್ತಿದ್ದಾರೆ.

Leave a Reply

Your email address will not be published. Required fields are marked *